ಮೌಲ್ಯ ವಿಶ್ಲೇಷಣೆ -
ಉತ್ಪಾದಿತ ವಸ್ತುವೊಂದರ ಅಗತ್ಯ ಪ್ರಯೋಜನ ಪಡೆಯಲು ಆ ವಸ್ತುವನ್ನು ಪಡೆದುಕೊಳ್ಳುವ ಮತ್ತು ಉಪಯೋಗಿಸಿಕೊಳ್ಳುವ ವೆಚ್ಚಗಳನ್ನು ಕನಿಷ್ಠವಾಗಿಸುವ ಉದ್ದೇಶದಿಂದ ಅದು ನಿರ್ವಹಿಸಬೇಕಾದ ಕಾರ್ಯಗಳ ಹಾಗೂ ಅದರ ವಿನ್ಯಾಸಗಳ ವಿಶ್ಲೇಷಣೆ (ವ್ಯಾಲ್ಯೂ ಅನಾಲಿಸಿಸ್). ಉದಾಹರಣೆಗೆ ಧ್ವನಿಮುದ್ರಕ ಯಂತ್ರ ಕೊಳ್ಳಬಯಸುವವ ತೆರಬೇಕಾದ ಬೆಲೆ ಮತ್ತು ಅದರ ಉಪಯುಕ್ತ ಜೀವನದ ಉದ್ದಕ್ಕೂ ಭರಿಸಬೇಕಾದ ನಿರ್ವಹಣ ವೆಚ್ಚಗಳ ಮೊತ್ತ ಕನಿಷ್ಠವಾಗಿರುವಂತೆ ಮತ್ತು ಅದು ಗ್ರಾಹಕ ಅಪೇಕ್ಷಿಸುವ ಸೇವೆ ನೀಡುವಂತೆ ಸಂಖ್ಯಾಕಲನೀಯ ವಿಶ್ಲೇಷಣೆಯ ಮೂಲಕ ಅದರ ವಿನ್ಯಾಸ, ಉತ್ಪಾದನೆ ಮತ್ತು ಮಾರಾಟ ನಂತರದ ಸೇವೆ ಇವುಗಳ ನಿರ್ಧರಣೆ. ಮೌಲ್ಯ ವಿಶ್ಲೇಷಣೆಯ ಜವಾಬ್ದಾರಿ ಸಾಮಾನ್ಯವಾಗಿ ವಿನ್ಯಾಸ ಎಂಜಿನಿಯರ್, ಸಂಖ್ಯಾಕಲನವಿಜ್ಞಾನಿ ಮತ್ತು ಬಳಕೆ ಕಾಲದ ಸೇವೆ - ಈ ವಿಭಾಗಗಳ ಪ್ರತಿನಿಧಿಗಳನ್ನು ಒಳಗೊಂಡ ತಂಡದವರದು. ಮೌಲ್ಯ ವಿಶ್ಲೇಷಣೆಯ ಪರಿಕಲ್ಪನೆ ಇತ್ತೀಚಿನದಾದರೂ ಅಸ್ಪಷ್ಟ ಹಾಗೂ ಅನೌಪಚಾರಿಕವಾಗಿ ಅದರ ವಿಧಿ ವಿಧಾನಗಳನ್ನು ಬಹಳ ಹಿಂದಿನಿಂದ ಬಳಸಲಾಗಿದೆ. ಏಕೆಂದರೆ ಮೌಲ್ಯ ವಿಶ್ಲೇಷಣೆಯ ಹಿಂದಿರುವ ತತ್ತ್ವ ಸಾರ್ವಕಾಲಿಕ; ಖರ್ಚು ಮಡುವ ಪ್ರತಿಯೊಂದು ರೂಪಾಯಿಯ ಪೂರ್ಣ ಮೌಲ್ಯವನ್ನೂ ಪಡೆಯಬೇಕು.

	ವಸ್ತುವೊಂದರ ಉಪಯುಕ್ತತೆ ಮತ್ತು ವೆಚ್ಚಗಳಿಗೆ ಸಂಬಂಧಿಸಿದ ಮಾಹಿತಿಯ ಸಂಗ್ರಹ ಮೌಲ್ಯ ವಿಶ್ಲೇಷಣೆಯ ಒಂದು ಅವಶ್ಯಕ ಅಂಗ. ಇದರಲ್ಲಿ ಉತ್ಪಾದನ ವೆಚ್ಚಗಳಲ್ಲದೆ ವಸ್ತುವನ್ನು ಚಾಲ್ತಿಯಲ್ಲಿಡಲು ಮತ್ತು ಕೊನೆಗೆ ವಿಸರ್ಜಿಸಲು ತಗುಲುವ ಖರ್ಚುಗಳೂ ಸೇರಿವೆ. ಉತ್ಪಾದನ ಸಂಸ್ಥೆಯ ಕೊಳ್ಳುವ ವಿಭಾಗಕ್ಕೆ ಅದು ತೆರಬೇಕಾದ ಬೆಲೆ ಮಾತ್ರ ಮುಖ್ಯವಲ್ಲ. ಖರ್ಚುಮಾಡುವ ಪ್ರತಿಯೊಂದು ರೂಪಾಯಿಗೆ ಉತ್ಪಾದಿತ ವಸ್ತು ಅಪೇಕ್ಷಿತ ಸೇವೆಯನ್ನು ಎಷ್ಟು ಕಾಲ ಎಷ್ಟು ದಕ್ಷತೆಯಿಂದ ನೀಡಬಹುದು ಮತ್ತು ಎಷ್ಟರಮಟ್ಟಿಗೆ ಗ್ರಾಹಕನನ್ನು ತೃಪ್ತಿಗೊಳಿಸಬಹುದು ಎಂಬುದು ಕೂಡ ಅಷ್ಟೇ ಮುಖ್ಯ.

	ಇಂದು ದೊಡ್ಡ ಪ್ರಮಾಣದ ಉತ್ಪಾದನೆ, ಬಳಕೆ ಮತ್ತು ತಾಂತ್ರಿಕ ಮುನ್ನಡೆಯ ಫಲವಾಗು ಮೌಲ್ಯ ವಿಶ್ಲೇಷಣೆ ಸ್ವಾಭಾವಿಕವಾಗಿಯೇ ವಿಶಿಷ್ಟ ಒತ್ತು ಪಡೆದು ಬಳಕೆಗೆ ಬರುತ್ತಿದೆ. ವಿಶೇಷವಾಗಿ ಇದರ ಔಚಿತ್ಯ ಬಹಳ ಕಾಲ ಬಾಳುವ ಮತ್ತು ಸಂತತವಾಗಿ ಬಳಸಲ್ಪಡುವ ವಸ್ತುಗಳಿಗೆ ಸಂಬಂಧಿಸಿದಂತೆ ಇದೆ. ಗುಣನಿಷ್ಠ ವಸ್ತುಗಳನ್ನು ನೀಡಬಯಸುವ ಉತ್ಪಾದಕನಿಗೆ ಮೌಲ್ಯ ವಿಶ್ಲೇಷಣೆ ಒಂದಸು ವ್ಯವಸ್ಥಿತ ಮಾರ್ಗ. ಹೊಸ ವಸ್ತು ಅಥವಾ ಬಿಡಿಭಾಗಗಳನ್ನು ಯೋಜಿಸಿ ಅಭಿವೃದ್ಧಿಗೊಳಿಸುವಲ್ಲಿ ಬಳಸಿದಾಗ ಅದು ಮೌಲ್ಯ ಎಂಜಿನಿಯರಿಂಗ್ ಎನ್ನಿಸಿಕೊಳ್ಳುತ್ತದೆ. ಆಗ ಪರಿಶೀಲಿಸಲಾಗುವ ಮುಖ್ಯ ಪ್ರಶ್ನೆ ಎಂದರೆ ನಿರ್ಧಾರಿತ ಉಪಯುಕ್ತತೆಯನ್ನು ಸದ್ಯ ಗೊತ್ತಿರುವ ವಸ್ತುಗಳಲ್ಲಿ ಯಾವುದಾದರೂ ನೀಡಬಹುದೇ? ಇದನ್ನು ಉತ್ತರಿಸುವಾಗ ಈಗಿರುವ ವಸ್ತುವೊಂದರ ಹೊಸ ಉಪಯುಕ್ತತೆ ಗುರುತಿಸಲ್ಪಟ್ಟು ಅದರ ವ್ಯಾಪ್ತಿಯ ಹೆಚ್ಚಳ ಸಾಧ್ಯ. ವಿನ್ಯಾಸ ನಿಗದಿಗಳ ನಿಧಾರ, ಉತ್ಪಾದನೆ ಹಾಗೂ ಪರೀಕ್ಷಣ ವಿಧಾನಗಳನ್ನು ರೂಪಿಸುವ ಕಾರ್ಯದಲ್ಲಿ ಉತ್ಪಾದಕನ ಹೊರತಾಗಿ ಎಂಜಿನಿಯರಿಂಗ್ ಸಂಘಗಳು, ಶಿಕ್ಷಣ ಸಂಸ್ಥೆಗಳು, ಭಾರತ ಮಾನಕ ಸಂಘ ಸಂಸ್ಥೆಗಳು, ಬಳಕೆದಾರರ ಸಂಘ ಇವುಗಳ ಕೈವಾಡವಿರಲು ಅವಕಾಶವಿದೆ.
									         (ಎಚ್.ಜೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ